ಯುನೆಸ್ಕೊ
ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆ. United Nations Educational Social and Cultural Organisation ಎಂಬ ಇಂಗ್ಲಿಷ್ ಪದಗಳ ಮೊದಲಕ್ಷರಗಳಿಂದ ರೂಪಿತವಾಗಿರುವ ಸಂಕ್ಷಿಪ್ತ ಶಬ್ದ (UNESCO) . 1946 ನವೆಂಬರ್ 4ರಂದು ಅಸ್ತಿತ್ವಕ್ಕೆ ಬಂತು. ವಿವಿಧ ರಾಷ್ಟ್ರಗಳ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕøತಿಕ ಅಭಿವೃದ್ಧಿ ಈ ಸಂಸ್ಥೆಯ ಕೆಲಸ. ಇದರ ಪ್ರಧಾನ ಕಚೇರಿ ಪ್ಯಾರಿಸ್.

	ಸದಸ್ಯತ್ವ : ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಇದರ ಸದಸ್ಯರಾಗುವ ಹಕ್ಕನ್ನು ಪಡೆದಿದ್ದರೂ ಸದಸ್ಯತ್ವ ಕಡ್ಡಾಯವಲ್ಲ. ಸೋವಿಯತ್ ಒಕ್ಕೂಟ 1954ರಲ್ಲಿ ತಡವಾಗಿ ಯುನೆಸ್ಕೊ ಸೇರಿದ್ದನ್ನೂ ಹಾಗೆಯೆ ಇದಕ್ಕೆ ಸಂಬಂಧಿಸಿದ ಕೆಲವು ಸುಧಾರಣೆಗಳನ್ನೂ ಅಮೆರಿಕ ಒಪ್ಪದೆ, ತನ್ನ ಸದಸ್ಯತ್ವವನ್ನು 1984ರಲ್ಲಿ ಹಿಂತೆಗೆದುಕೊಂಡಿದ್ದನ್ನೂ ಅನಂತರ ಬ್ರಿಟನ್ ಮತ್ತು ಸಿಂಗಪುರಗಳು ಹೊರಬಂದ ವಿಷಯಗಳನ್ನೂ ಇಲ್ಲಿ ಉದಾಹರಿಸಬಹುದು.

	ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರದ ರಾಷ್ಟ್ರಗಳು ಯುನೆಸ್ಕೊ ಸಂಸ್ಥೆಯನ್ನು ಎರಡು ಷರತ್ತುಗಳ ಆಧಾರದ ಮೇಲೆ ಸೇರಬಹುದು. ಮೊದಲನೆಯದಾಗಿ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಲಿಯ ಅನುಮತಿ ಪಡೆಯಬೇಕು. ಎರಡನೆಯದಾಗಿ, ಯುನೆಸ್ಕೊ ಕಾರ್ಯಕಾರಿ ಮಂಡಲಿಯ ಶಿಫಾರಸಿನ ಆಧಾರದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೆಯ ಎರಡರಷ್ಟು ಬಹುಮತ ಪಡೆಯಬೇಕು. ಸದಸ್ಯ ರಾಷ್ಟ್ರಗಳನ್ನು ಹೊರ ಹಾಕಲು ವಿಶ್ವಸಂಸ್ಥೆಯ ನಿಯಮಾವಳಿ ಇಲ್ಲೂ ಅನ್ವಯವಾಗುತ್ತದೆ. 1962ರಲ್ಲಿ 113 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಯುನೆಸ್ಕೊ 1986ರಲ್ಲಿ 183 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿತ್ತು.

	ರಚನೆ : ಸಾಮಾನ್ಯ ಸಭೆ, ಕಾರ್ಯಕಾರಿ ಮಂಡಲಿ ಮತ್ತು ಕಾರ್ಯಾಲಯ ಯುನೆಸ್ಕೊ ಸಂಸ್ಥೆಯ ಮೂರು ಮುಖ್ಯ ಅಂಗಗಳು. ಪ್ರತಿಯೊಂದು ಸದಸ್ಯ ರಾಷ್ಟ್ರ ಐವರು ಪ್ರತಿನಿಧಿಗಳನ್ನು ಸಾಮಾನ್ಯ ಸಭೆಗೆ ನಿಯೋಜಿಸಬಹುದಾದರೂ ಮತದ ಹಕ್ಕು ಮಾತ್ರ ಒಂದೆ. ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಲು ಮೂರನೆಯ ಎರಡರಷ್ಟು ಬಹುಮತ ಬೇಕು. ಯುನೆಸ್ಕೊ ನಿಯಮಗಳನ್ನು ಅಳವಡಿಸುವುದು. ಸಮ್ಮೇಳನಗಳನ್ನು ಕರೆಯುವುದು. ಸದಸ್ಯ ರಾಷ್ಟ್ರಗಳಿಗೆ ಸಲಹೆ ನೀಡುವುದು ಮತ್ತು ಅವುಗಳಿಂದ ಬಂದ ವರದಿಗಳನ್ನು ಪರಿಶೀಲಿಸುವುದು, ಕಾರ್ಯಕಾರಿ ಮಂಡಲಿಯ ಸದಸ್ಯರನ್ನು ಚುನಾಯಿಸುವುದು, ಮಹಾನಿರ್ದೇಶಕರನ್ನು ನೇಮಿಸುವುದು ಹಾಗೂ ತನ್ನ ಕಾರ್ಯ ವ್ಯಾಪ್ತಿಯಲ್ಲಿ ವಿಶ್ವಸಂಸ್ಥೆಗೆ ಸಲಹೆ ನೀಡುವುದು ಸಾಮಾನ್ಯ ಸಭೆಯ ಮುಖ್ಯ ಕರ್ತವ್ಯಗಳಾಗಿವೆ.

	ಕಾರ್ಯಕಾರಿ ಮಂಡಲಿಯ ಸದಸ್ಯರ ಅಧಿಕಾರಾವಧಿ ಮೂರು ವರ್ಷ. ಒಬ್ಬ ಸದಸ್ಯ ಎರಡು ಅವಧಿಗೆ ಮಾತ್ರ ಆಯ್ಕೆಯಾಗಲು ಅವಕಾಶವಿದೆ. ಮೊದಲು 18 ಸದಸ್ಯರನ್ನು ಹೊಂದಿದ್ದ ಇದು, ಪ್ರಸ್ತುತ ಸುಮಾರು 51 ಸದಸ್ಯರ ಮಂಡಲಿಯಾಗಿದೆ. ಪ್ರಾರಂಭದಿಂದಲೂ ಭಾರತ ಇದರಲ್ಲಿ ಪ್ರಾತಿನಿಧ್ಯ ಪಡೆದಿದೆ. ಎಸ್. ರಾಧಾಕೃಷ್ಣನ್, ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮತ್ತು ಪ್ರೇಮ್ ಕಿರ್‍ಪಾಲ್ ಇದರ ಸದಸ್ಯರಾಗಿಯೂ ಮತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದಿರಾಗಾಂಧಿ 1960-64ರ ಸಮಯದಲ್ಲಿ ಸದಸ್ಯರಾಗಿದ್ದರು. ಈ ಮಂಡಲಿಯ ಸದಸ್ಯರು ಪರಿಣಿತರಂತೆ ಕಾರ್ಯನಿರ್ವಹಿಸಬೇಕು. ಇದರ ಮುಖ್ಯ ಕರ್ತವ್ಯಗಳೆಂದರೆ: ಸಾಮಾನ್ಯ ಸಭೆ ಅಂಗೀಕರಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು, ಅದರ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧ ಪಡಿಸುವುದು, ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಶಿಫಾರಸು ಮಾಡುವುದು ಹಾಗೂ ಮಹಾ ನಿರ್ದೇಶಕರಿಗೆ ವಾರ್ಷಿಕ ವರದಿಯನ್ನು ಸಲ್ಲಿಸುವುದು. ಇದರ ಕಾರ್ಯಾಲಯ ಮಹಾ ನಿರ್ದೇಶಕರ ನೇತೃತ್ವದಲ್ಲಿ ಕೆಲಸ ಮಾಡುತ್ತದೆ. ಕಾರ್ಯಕಾರಿ ಮಂಡಲಿಯ ಶಿಫಾರಸ್ಸಿನ ಆಧಾರದ ಮೇಲೆ ಮಹಾ ನಿರ್ದೇಶಕರನ್ನು 5 ವರ್ಷದ ಅವಧಿಗೆ ಸಾಮಾನ್ಯ ಸಭೆ ಆಯ್ಕೆ ಮಾಡುತ್ತದೆ. ಇದರ ಬಜೆಟ್ ಸು. 374 ಮಿಲಿಯನ್ ಡಾಲರ್‍ಗಳಷ್ಟು ಇದೆಯೆಂದು ಅಂದಾಜು ಮಾಡಲಾಗಿದೆ. ಇದರ ಖರ್ಚುವೆಚ್ಚವನ್ನು ಸದಸ್ಯ ರಾಷ್ಟ್ರಗಳು ಭರಿಸುತ್ತವೆ.

	 ಶೈಕ್ಷಣಿಕ ಚಟುವಟಿಕೆಗಳು : ವಿಶ್ವದ ಸಾರ್ವತ್ರಿಕ ಶಿಕ್ಷಣ ಸುಧಾರಣೆಗೆ ಯುನೆಸ್ಕೊ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ವರಿಗೂ ಶಿಕ್ಷಣ ಎಂಬ ನಿಯಮವನ್ನು ಪ್ರಸಾರ ಮಾಡುತ್ತಿದೆ. 1946ರಲ್ಲಿ ನಡೆಸಿದ ಶಿಕ್ಷಣ ತಜ್ಞರ ಸಮ್ಮೇಳನದಲ್ಲಿ ಮನುಷ್ಯ ಪೂರ್ಣ ಹಾಗೂ ಸಂತೋಷ ಜೀವನವನ್ನು ನಡೆಸಲು ಮತ್ತು ತನ್ನ ಭೌತಿಕ ಹಾಗೂ ಸಾಮಾಜಿಕ ಪರಿಸರದ ಮೇಲೆ ನಿಯಂತ್ರಣ ಹೊಂದುವಂತೆ ಮಾಡುವುದೇ ಮೂಲಭೂತ ಶಿಕ್ಷಣದ ಮುಖ್ಯ ಗುರಿ ಎಂದು ಘೋಷಿಸಿತು. 1957ರಲ್ಲಿ 12 ರಾಷ್ಟ್ರಗಳ ಸಭೆಯನ್ನು ಹವಾನದಲ್ಲಿ ನಡೆಸಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಕಾರ್ಯಕ್ರಮವನ್ನು ರೂಪಿಸಿತು. ಅಭಿವೃದ್ಧಿಶೀಲ ದೇಶಗಳಲ್ಲಿ ಶೇ. ಸು. 80ರಷ್ಟು ಮಕ್ಕಳು ಶಾಲೆಗಳಲ್ಲಿ ಮೂಲಭೂತ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ, ಈ ದೇಶಗಳಲ್ಲಿ ಸು. 60ರಷ್ಟು ವಯಸ್ಕರು ಓದಲು ಮತ್ತು ಬರೆಯಲು ಶಕ್ತರಾಗಿದ್ದಾರೆ ಹಾಗೂ ಮಹಿಳೆಯರ ಸಾಕ್ಷರತೆ ಶೇ. 36ರಿಂದ (1970) ಶೇ. 56ಕ್ಕೆ (1990) ಹೆಚ್ಚಿದೆ. ಇದರ ಸಾಮಾನ್ಯ ಸಭೆ 1960ರಲ್ಲಿ ಅಂಗೀಕರಿಸಿದ ನೀತಿಯಂತೆ ಶಿಕ್ಷಣದಲ್ಲಿ ತಾರತಮ್ಯವನ್ನು ನಿಷೇಧಿಸಲಾಗಿದೆ. ಪ್ರೌಢ ಹಾಗೂ ಉನ್ನತ ಮಟ್ಟದ ಶಿಕ್ಷಣಕ್ಕೂ ಉತ್ತೇಜನ ಮತ್ತು ಸಹಕಾರವನ್ನು ನೀಡುತ್ತಿದೆ. ಪಠ್ಯಕ್ರಮಗಳ ಸುಧಾರಣೆಗೆ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ವಿವಿಧ ಭಾಷೆಗಳ ಬೋಧನೆಗೆ ಮತ್ತು ಸಂಶೋಧನೆಗೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅಂತರರಾಷ್ಟ್ರೀಯ ವೈಜ್ಞಾನಿಕ ಸಹಕಾರದ ಬೆಳೆವಣಿಗೆಗೆ ಒತ್ತುಕೊಟ್ಟು. ನಾಲ್ಕು ಪ್ರಾದೇಶಿಕ ವಿಜ್ಞಾನ ಸಹಕಾರ ಕೇಂದ್ರಗಳನ್ನು ದಕ್ಷಿಣ ಅಮೆರಿಕ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯಗಳಲ್ಲಿ ಸ್ಥಾಪಿಸಿದೆ. ಉರುಗ್ವೆ, ಚೀನ, ಭಾರತ ಹಾಗೂ ಈಜಿಪ್ಟ್‍ಗಳಲ್ಲಿ ವಿಜ್ಞಾನ ಕಚೇರಿಗಳನ್ನು ಸ್ಥಾಪಿಸಿದೆ. ಸಾಗರಗಳನ್ನು ಮತ್ತು ಅವುಗಳ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಸಾಗರಶಾಸ್ತ್ರ ಆಯೋಗವನ್ನು ನೇಮಿಸಿದೆ.

	ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾಜ ವಿಜ್ಞಾನಗಳ ಅಧ್ಯಯನಕ್ಕೂ ವಿಶೇಷ ಗಮನವನ್ನು ಹರಿಸಿದೆ. ಸಮಾಜ ವಿಜ್ಞಾನದ ಅಧ್ಯಯನದಿಂದ ಸಾಮಾಜಿಕ, ಧಾರ್ಮಿಕ ಮತ್ತು ಇತರ ಸಮಸ್ಯೆಗಳನ್ನು ಹಾಗೂ ಕೈಗಾರಿಕೀಕರಣ ಮತ್ತು ನಗರೀಕರಣದಿಂದ ಉಂಟಾಗುವ ತೊಂದರೆಗಳನ್ನು ವಿಶ್ಲೇಷಿಸಿ, ಪರಿಹಾರಗಳನ್ನು ಸೂಚಿಸಲು ಸಾಧ್ಯ ಎಂಬುದನ್ನು ಯುನೆಸ್ಕೊ ಮನಗಂಡಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರ ಸೂಕ್ತ ತರಬೇತಿಗೆ ಪ್ರೋತ್ಸಾಹ ನೀಡುತ್ತಿದೆ. ಸಮುದಾಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಎರಡು ಶಿಕ್ಷಕ ತರಬೇತಿ ಸಂಸ್ಥೆಗಳನ್ನು ಮೆಕ್ಸಿಕೋ (1951) ಮತ್ತು ಯುನೈಟೆಡ್ ಅರಬ್ ಎಮಿರೆಟಿಸ್‍ನಲ್ಲಿ (1953) ಸ್ಥಾಪಿಸಿದೆ. 1963ರಲ್ಲಿ ಶೈಕ್ಷಣಿಕ ಯೋಜನಾ ಸಂಸ್ಥೆಯನ್ನು ಪ್ಯಾರಿಸ್‍ನಲ್ಲಿ ಸ್ಥಾಪಿಸಿತು. ಹೆಚ್ಚು ಜ್ಞಾನವನ್ನು ಹರಡಲು ಮತ್ತು ಶಿಕ್ಷಕರಿಗೆ ತರಬೇತಿ ಕೊಡಲು ಯುನೆಸ್ಕೊ ನೆರವಿನಿಂದ ದೆಹಲಿ ವಿಶ್ವವಿದ್ಯಾಲಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಶಿಕ್ಷಣ ತಜ್ಞರಿಗೆ ಮತ್ತು ಇತರರಿಗೆ ವಿಶೇಷ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿದೇಶಗಳಲ್ಲಿ ಜ್ಞಾನ ಸಂಪಾದನೆಗೆ ಅವಕಾಶ ಕಲ್ಪಿಸಿದೆ. ಇದು ಪ್ರಕಟಿಸುವ ಹ್ಯಾಂಡ್ ಬುಕ್ ಆಫ್ ಇಂಟರ್‍ನ್ಯಾಷನಲ್ ಎಕ್ಸ್‍ಚೇಂಜಸ್ ಈ ಕಾರ್ಯಕ್ರಮದ ಹೆಚ್ಚು ಮಾಹಿತಿಯನ್ನು ಒಳಗೊಂಡಿರುತ್ತದೆ.

	ಸಾಂಸ್ಕøತಿಕ ಕ್ಷೇತ್ರದಲ್ಲಿ ಯುನೆಸ್ಕೊದ ಮುಖ್ಯ ಕರ್ತವ್ಯಗಳಿವು :
	(ಅ) ಕಲೆಗಾರರಿಗೆ ಪ್ರೋತ್ಸಾಹ ಮತ್ತು ರಕ್ಷಣೆ ನೀಡುವುದು.
	(ಆ) ಸಾಂಸ್ಕøತಿಕ ವಿನಿಮಯಕ್ಕೆ ಬೆಂಬಲ ಕೊಡುವುದು.
	(ಇ) ಕಲೆ ಮತ್ತು ಸಾಹಿತ್ಯದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಉತ್ತೇಜನ ನೀಡುವುದು.
	(ಈ) ಸಾಂಸ್ಕøತಿಕ ಪರಂಪರೆಯನ್ನು ಸಂರಕ್ಷಿಸುವುದು.
	(ಉ) ವಸ್ತುಸಂಗ್ರಹಾಲಯಗಳನ್ನು ಮತ್ತು ಗ್ರಂಥಾಲಯಗಳನ್ನು ವೃದ್ಧಿಪಡಿಸುವುದು.

	1952ರ ಬರೆಹಗಾರರ ಮತ್ತು ಕಲಾವಿದರ ಸಮ್ಮೇಳನದಲ್ಲಿ ಜರುಗಿದ `ದಿ ಯೂನಿವರ್ಸಲ್ ಕಾಪಿರೈಟ್ ಕನ್‍ವೆನ್‍ಷನ್ ವಿಶ್ವ ಗ್ರಂಥಸ್ವಾಮ್ಯ ಅಧಿವೇಶನದ ನಿರ್ಣಯಗಳನ್ನು ಅಂಗೀಕರಿಸಿತು. ಅಲ್ಲದೆ, ಅಂತರರಾಷ್ಟ್ರೀಯ ರಂಗಮಂಟಪ ಸಂಸ್ಥೆ (1948). ಅಂತರರಾಷ್ಟ್ರೀಯ ಸಂಗೀತ ಮಂಡಲಿ (1949), ತತ್ತ್ವಶಾಸ್ತ್ರ ಹಾಗೂ ಮಾನವಿಕ ಅಧ್ಯಯನಗಳ ಅಂತರರಾಷ್ಟ್ರೀಯ ಮಂಡಲಿ, ಅಂತರರಾಷ್ಟ್ರೀಯ ಸಮಾಜಶಾಸ್ತ್ರ ಸಂಘ ಹಾಗೂ ಅಂತರರಾಷ್ಟ್ರೀಯ ರಾಜ್ಯಶಾಸ್ತ್ರ ಸಂಘ ಇವನ್ನು ಸ್ಥಾಪಿಸಿದೆ. ಮಾನವರಲ್ಲಿ ಯುದ್ಧಗಳ ಕಲ್ಪನೆಗಳನ್ನು ತಡೆದು ಶಾಂತಿ ಕಲ್ಪನೆಯನ್ನು ಉಂಟುಮಾಡಬೇಕು ಎಂದು ಯುನೆಸ್ಕೊ ಸಂವಿಧಾನ ತಿಳಿಸುತ್ತದೆ.

	ಸಮೂಹ ಸಂಪರ್ಕ ಅಭಿವೃದ್ಧಿ ಚಟುವಟಿಕೆಗಳು: ಯುನೆಸ್ಕೊ ಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಂಪರ್ಕದ ಮೂಲಕ ಅರಿವನ್ನು ಮೂಡಿಸಿ ಸಹಕಾರವನ್ನು ಉಂಟುಮಾಡಬಹುದು. ಆದ್ದರಿಂದ ಸಮೂಹ ಸಂಪರ್ಕದ ಅಭಿವೃದ್ಧಿಗೆ ಹಾಗೂ ಸ್ವತಂತ್ರ ವಾರ್ತಾ ಪ್ರಸಾರಕ್ಕೆ ಗಮನ ಕೊಟ್ಟಿದೆ. ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಫ್ರಾನ್ಸ್ ಮತ್ತು ಈಕ್ವಡಾರ್ ದೇಶಗಳಲ್ಲಿ ಎರಡು ಅಂತರರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಿದೆ. ದಿ ಯುನೆಸ್ಕೊ ಕರಿಯರ್ ಪತ್ರಿಕೆ ಇಂಗ್ಲಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಭಾರತದ ಸಮೂಹ ಮಾಧ್ಯಮದ ಸಂಸ್ಥೆ, ರಾಷ್ಟ್ರೀಯ ಗ್ರಂಥ ನ್ಯಾಸ ಹಾಗೂ ದೆಹಲಿಯ ಸಾರ್ವಜನಿಕ ಗ್ರಂಥಾಲಯ-ಇವು ಯುನೆಸ್ಕೊ ಸಹಾಯವನ್ನು ಪಡೆಯುತ್ತಿವೆ. ಯುನೆಸ್ಕೊ ಮತ್ತು ಫೋರ್ಡ್ ಫೌಂಡೇಷನ್ ನೆರವಿನಿಂದ ಪುಣೆಯಲ್ಲಿ ಚಲನಚಿತ್ರ ಮತ್ತು ದೂರದರ್ಶನ ಪ್ರಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

	ನವ ಪ್ರಪಂಚ ವಾರ್ತಾ ಮತ್ತು ಸಂಪರ್ಕ ವ್ಯವಸ್ಥೆ ಯುನೆಸ್ಕೊದ ಮುಖ್ಯ ಕೊಡುಗೆಯಾಗಿದೆ. ಇದು ಎರಡು ಮುಖ್ಯ ಧ್ಯೇಯಗಳನ್ನು ಹೊಂದಿದೆ : (1) ತೃತೀಯ ಜಗತ್ತಿನಲ್ಲಿ ಸಂಪರ್ಕ ಸಾಧನವನ್ನು ಅಭಿವೃದ್ಧಿಗೊಳಿಸುವುದು. (2) ದೇಶೀಯ ಹಾಗೂ ವಿದೇಶೀಯ ವಾರ್ತಾ ಮೂಲಗಳ ರಾಜಕೀಯ ನಿಯಂತ್ರಣಕ್ಕೆ ಅಂತರರಾಷ್ಟ್ರೀಯ ಮಂಜೂರಾತಿ ಒದಗಿಸುವುದು. 1978ರಲ್ಲಿ ಅಂಗೀಕರಿಸಿದ ಸಮೂಹ ಮಾಧ್ಯಮ ಘೋಷಣೆ ಸಂಪರ್ಕ ಅಭಿವೃದ್ಧಿಗೆ ಅಂತರರಾಷ್ಟ್ರೀಯ ನವ ಪ್ರಪಂಚ ವಾರ್ತಾ ಸಂಪರ್ಕ ವ್ಯವಸ್ಥೆಯನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು ಪೂರಕವಾಗಿವೆ. ಇದಕ್ಕೆ ಸಂಬಂಧಿಸಿದಂತೆ 15 ಸದಸ್ಯರನ್ನು ಒಳಗೊಂಡಿದ್ದ ಮ್ಯಾಕ್‍ಬ್ರೈಡ್ ಆಯೋಗ ಡಿಸೆಂಬರ್ 1977ರಲ್ಲಿ ನೇಮಕಗೊಂಡಿದ್ದು 1980ರಲ್ಲಿ ಸುಮಾರು 82 ಶಿಫಾರಸುಗಳನ್ನು ಮಾಡಿತು.

	ಯುನೆಸ್ಕೊ ತನ್ನ ಕಾರ್ಯಚಟುವಟಿಕೆಗಳಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದೆ. ಇದರ ಕಾರ್ಯಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಉಪಯುಕ್ತವಾಗಿವೆ. ವಿಶ್ವದಲ್ಲಿ ಜ್ಞಾನದ ಬೆಳಕನ್ನು ಚೆಲ್ಲಿ, ವೈಜ್ಞಾನಿಕ ಮನೋಧರ್ಮ ಬೆಳೆಸಿ, ವಿಶ್ವಶಾಂತಿ ಮತ್ತು ಭದ್ರತೆಯನ್ನು ಬೆಂಬಲಿಸುತ್ತಿರುವ ಯುನೆಸ್ಕೊ ಸಂಸ್ಥೆಗೆ ಹಣದ ಮುಗ್ಗಟ್ಟಿದ್ದರೂ ರಚನಾತ್ಮಕ ಕಾರ್ಯಗಳನ್ನು ಜಾರಿಗೆ ತರುತ್ತಿದೆ. 
        							 (ಎಚ್.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ